Chief Minister of Karnataka, Sri.Siddaramaiah`s Statement – However powerful and mighty – the encroachers will not be spared. SENDS A STRONG MESSAGE TO THE ENCROACHERS. NO MERCY.

ರಾಜಕಾಲುವೆಯನ್ನು ಯಾರೇ ಒತ್ತುವರಿ ಮಾಡಿರಲಿ, ಅವರು ಎಷ್ಟೇ ಪ್ರಭಾವಿಗಳಾಗಿದ್ದರು, ದೊಡ್ಡ ಬಿಲ್ಡರ್ ಗಳಾಗಿದ್ದರೂ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರಾಜಾಕಾಲುವೆ ಒತ್ತುವರಿ ತೆರವು ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಬೆಂಗಳೂರು ಚೆನ್ನೈ ರೀತಿ ಆಗುತ್ತಿದೆ ಅಂತೀರಿ… ಒತ್ತುವರಿ ತೆರವು ಮಾಡಿದರೂ ಮನೆ ಒಡೆಸುತ್ತಿದ್ದಾರೆ ಅಂತ ಹೇಳ್ತೀರಿ..ನಾವ್ ಏನ್ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.
ಒಂದು ಒಳ್ಳೆಯ ಕೆಲಸ ಮಾಡುವಾಗ ಟೀಕೆ, ಟಿಪ್ಪಣಿ ಸಹಜ, ಅದರಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು. ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದರೆ ಸುಮ್ಮನಿರಬೇಕಾ? ಜನರು ತಪ್ಪು ಮಾಡಿಲ್ವಾ…ಜನರಿಗೆ ಗೊತ್ತಿರಲಿಲ್ವಾ? ಎಂದು ವರದಿಗಾರರಿಗೆ ತಿರುಗೇಟು ನೀಡಿದರು.
ಅಧಿಕಾರಿಗಳೂ ತಪ್ಪು ಮಾಡಿದ್ದಾರೆ, ಜನರೂ ತಪ್ಪು ಮಾಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಕೆಯನ್ನು ನೀಡಿದರು.
ಬಿಬಿಎಂಪಿ ಅಧಿಕಾರಿಗಳು ಕಳೆದ ಶನಿವಾರದಿಂದ ನಡೆಸುತ್ತಿರುವ ಅಕ್ರಮ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರವೂ ಮುಂದುವರೆದಿದ್ದು,  ಮಹದೇವಪುರ, ಕೈಗೊಂಡನಹಳ್ಳಿ ಮತ್ತು ಕಸವನಹಳ್ಳಿಯಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ.