RECOVERY OF GOVERNMENT LANDS FOR NON – COMPLIANCE AT BANNERGATTA ROAD, BANGALORE
A PRESS REPORT
ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಖಾಸಗಿ ಆಸ್ಪತ್ರೆಯನ್ನು ಸ್ವಾಧೀನಪಡಿಸಿಕೊಂಡು ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಗೆ ಹಸ್ತಾಂತರಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಕಂದಾಯ ಇಲಾಖೆಗೆ ಸೋಮವಾರ ಪ್ರಸ್ತಾವ ಸಲ್ಲಿಸಿದ್ದಾರೆ.
ಬಿಳೇಕಹಳ್ಳಿ ಗ್ರಾಮದಲ್ಲಿ ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ 1991ರಲ್ಲಿ ಜಮೀನು ಮಂಜೂರು ಮಾಡಿದ್ದ ಆದೇಶವನ್ನು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಡಿಸೆಂಬರ್ 29ರಂದು ರದ್ದು ಮಾಡಿದ್ದರು. ಅದನ್ನು ಆಧರಿಸಿ ಜಿಲ್ಲಾಧಿಕಾರಿ ಈ ಕ್ರಮ ಜರುಗಿಸಿದ್ದಾರೆ. ಭೂ ಮಂಜೂರಾತಿ ಷರತ್ತುಗಳಿಗೆ ವಿರುದ್ಧವಾಗಿ ಅದೇ ಜಮೀನಿನಲ್ಲಿ ನಿರ್ಮಾಣವಾಗಿರುವ ಅಪೋಲೊ ಆಸ್ಪತ್ರೆಯನ್ನು ವಶಕ್ಕೆ ಪಡೆಯಬೇಕು ಎಂದು ಕೋರಿದ್ದಾರೆ.
ಅಕ್ರಮವಾಗಿ ಗುತ್ತಿಗೆಗೆ: ತಾನು ಅಮೆರಿಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದು, ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಆಸ್ಪತ್ರೆ ತೆರೆಯಲು 10ರಿಂದ 15 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಕೋರಿ ಹೈದರಾಬಾದ್ ಮೂಲದ ಡಾ.ಸೈಯದ್ ನಿಸಾರ್ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿಳೇಕಹಳ್ಳಿಯ ಸರ್ವೆ ನಂಬರ್ 154/11ರಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಲಾಗಿತ್ತು.
ಪ್ರತಿ ಎಕರೆಗೆ ₨ 2 ಲಕ್ಷದಂತೆ ಒಟ್ಟು ₨ 10 ಲಕ್ಷ ಮೌಲ್ಯಕ್ಕೆ ಈ ಜಮೀನನ್ನು 1991ರಲ್ಲಿ ಮಂಜೂರು ಮಾಡಲಾಗಿತ್ತು. ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಹೊರತಾದ ಉದ್ದೇಶಕ್ಕೆ ಅದನ್ನು ಬಳಸಬಾರದು, ಗುತ್ತಿಗೆಗೆ ನೀಡುವಂತಿಲ್ಲ, ಮಾರಾಟ ಮಾಡುವಂತಿಲ್ಲ ಮತ್ತು ಅಡಮಾನ ಇಡುವಂತಿಲ್ಲ ಎಂಬ ಷರತ್ತುಗಳೊಂದಿಗೆ ಜಮೀನನ್ನು ನೀಡಲಾಗಿತ್ತು.
ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪಿಸುವುದಾಗಿ ಪಡೆದ ಜಮೀನನ್ನು ಖಾಸಗಿ ವಲಯದ ಅಪೋಲೊ ಐಷಾರಾಮಿ ಆಸ್ಪತ್ರೆಗೆ ಗುತ್ತಿಗೆಗೆ ನೀಡಲಾಗಿದೆ ಎಂಬುದನ್ನು ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ನೇತೃತ್ವದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ಪತ್ತೆ ಮಾಡಿತ್ತು. ಜಮೀನಿನ ಒಡೆತನ ಉಳಿಸಿಕೊಳ್ಳುವುದಕ್ಕಾಗಿ ಅಪೋಲೊ ಆಸ್ಪತ್ರೆಯ ಕೊಠಡಿಯೊಂದಕ್ಕೆ ‘ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ’ ಎಂಬ ನಾಮಫಲಕ ನೇತು ಹಾಕಲಾಗಿದೆ ಎಂಬುದು ಸ್ಥಳ ತನಿಖೆಯಲ್ಲಿ ಬಯಲಿಗೆ ಬಂದಿತ್ತು.
ಆಸ್ಪತ್ರೆ ಇರುವ ಜಮೀನು ತಮಗೆ ಸೇರಿದ್ದು ಎಂದು ದೊರೆಸಾನಿಪಾಳ್ಯದ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಚರ್ಚ್‌ನ ಸದಸ್ಯ ಇಸಾಕ್ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಯವರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಇಸಾಕ್ ಅವರ ಕೋರಿಕೆಯನ್ನು ತಳ್ಳಿಹಾಕಿದ್ದ ಉಪ ವಿಭಾಗಾಧಿಕಾರಿ ನಾಗರಾಜ್, ಇಂಪೀರಿಯಲ್ ಆಸ್ಪತ್ರೆಗೆ ನೀಡಿದ್ದ ಜಮೀನು ದುರ್ಬಳಕೆ ಆಗಿದೆ ಎಂಬ ಅಭಿಪ್ರಾಯ ನೀಡಿದ್ದರು.
‘ಇಂಪೀರಿಯಲ್ ಆಸ್ಪತ್ರೆಯನ್ನೇ ಅಪೋಲೊ ಆಸ್ಪತ್ರೆ ಖರೀದಿಸಿದೆ ಎಂಬ ಉತ್ತರ ಅಪೋಲೊ ಆಸ್ಪತ್ರೆಯ ಅಧ್ಯಕ್ಷರಿಂದ ಬಂದಿದೆ. ಇದು ಭೂ ಮಂಜೂರಾತಿ ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳ ಸ್ಪಷ್ಟ ಉಲ್ಲಂಘನೆ. ಆದ್ದರಿಂದ ಈ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಜರುಗಿಸಬೇಕು’ ಎಂದು 2014ರ ಫೆಬ್ರುವರಿ 3ರಂದು ಹೊರಡಿಸಿದ್ದ ಆದೇಶದಲ್ಲಿ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದ್ದರು.
ಆಸ್ಪತ್ರೆ ವಶಕ್ಕೆ ಶಿಫಾರಸು: ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಡಾ.ಸೈಯದ್ ನಿಸಾರ್ ಅವರಿಗೆ ಐದು ಎಕರೆ ಜಮೀನು ಮಂಜೂರು ಮಾಡಿದ್ದ ಆದೇಶವನ್ನು ರದ್ದು ಮಾಡುವಂತೆ ಕೋರಿ ತಹಶೀಲ್ದಾರ್ ಸಲ್ಲಿಸಿದ್ದ ಪ್ರಸ್ತಾವವನ್ನು ಮಾನ್ಯಮಾಡಿ ಉಪ ವಿಭಾಗಾಧಿಕಾರಿ ಡಿ.29ರಂದು ಜಿಲ್ಲಾಧಿಕಾರಿಯವರಿಗೆ ಕಡತ ಸಲ್ಲಿಸಿದ್ದರು.
‘ಬಿಳೇಕಹಳ್ಳಿಯ ಸರ್ವೆ ನಂಬರ್ 154/11ರಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಮಂಜೂರು ಮಾಡಿದ್ದ ಜಮೀನನ್ನು ಎಲ್ಲ ಋಣಭಾರಗಳಿಂದ ಮುಕ್ತಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು. ಈ ಜಮೀನು ಮತ್ತು ಅಲ್ಲಿರುವ ಆಸ್ಪತ್ರೆಯ ಕಟ್ಟಡವನ್ನು ಯಥಾರೀತಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಹಸ್ತಾಂತರ ಮಾಡಬೇಕು. ಆಗ ಈ ಜಮೀನಿನ ಮಂಜೂರಾತಿಯ ಮೂಲ ಉದ್ದೇಶವಾದ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಸ್ಥಾಪನೆ ಸಫಲವಾಗುತ್ತದೆ’ ಎಂದು ಉಪ ವಿಭಾಗಾಧಿಕಾರಿಯವರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದರು.
ಉಪ ವಿಭಾಗಾಧಿಕಾರಿಯವರು ಮಂಡಿಸಿದ್ದ ಪ್ರಸ್ತಾವವನ್ನು ಅನುಮೋದಿಸಿರುವ ಜಿಲ್ಲಾಧಿಕಾರಿ, ಅಪೋಲೊ ಆಸ್ಪತ್ರೆ ವಶಕ್ಕೆ ಶಿಫಾರಸು ಮಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರಿಗೆ ಸೋಮವಾರ ಪ್ರಸ್ತಾವ ಸಲ್ಲಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಮತ್ತು ಕಂದಾಯ ಸಚಿವರ ಪರಿಶೀಲನೆ ಬಳಿಕ ಆಸ್ಪತ್ರೆ ವಶಕ್ಕೆ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.