Betterment Charges – A Clarification from the Commissioner

A News report on BETTERMENT CHARGES  on 31-07-2014 – BBMP

ಏಕನಿವೇಶನಗಳಿಗೆ ಮಾತ್ರ ಅಭಿವೃದ್ಧಿ ಶುಲ್ಕ

ಬಿಬಿಎಂಪಿ ಆಯುಕ್ತರ ಸ್ಪಷ್ಟನೆ ಟಿ ಅಕ್ರಮ-ಸಕ್ರಮ ಕನಸು ಇನ್ನೂ ದೂರ

ಬೆಂಗಳೂರು: ರಾಜ್ಯ ಸರ್ಕಾರದ ಅಕ್ರಮ-ಸಕ್ರಮ ನೀತಿ ಇನ್ನೂ ಚರ್ಚೆಯಲ್ಲಿರುವುದರಿಂದ ಸದ್ಯಕ್ಕೆ ಏಕನಿವೇಶನಗಳಿಗೆ ಮಾತ್ರ ಅಭಿವೃದ್ಧಿ ಶುಲ್ಕ ವಿಧಿಸಲಾಗುವುದು ಎಂದು ಆಯುಕ್ತ ಎಂ.ಲಕ್ಷ್ಮೀನಾರಾಯಣ ತಿಳಿಸಿದರು.

ಬಿಬಿಎಂಪಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರದ ಅಕ್ರಮ-ಸಕ್ರಮ ಯೋಜನೆ ಇನ್ನೂ ಅನ್ವಯವಾಗಿಲ್ಲ. ಈ ಹಂತದಲ್ಲಿ ಬಿಬಿಎಂಪಿ ಅಭಿವೃದ್ಧಿ ಶುಲ್ಕ ಸಂಗ್ರಹಿಸಿದರೆ ಸರ್ಕಾರದ ವಿರುದ್ಧ ಕ್ರಮ ಕೈಗೊಂಡಂತಾಗುತ್ತದೆ. ಪರಿವರ್ತಿತ ಭೂಮಿಯಲ್ಲಿ ಒಂದೇ ನಿವೇಶನ ಮಾಡಿದ್ದರೆ ಶುಲ್ಕ ವಿಧಿಸಲಾಗುವುದು. ಹಲವು ನಿವೇಶನಗಳನ್ನು ಮಾಡಿದ್ದರೆ ಪರಿಶೀಲಿಸಬೇಕಾಗುತ್ತದೆ ಎಂದರು.

ಹೈಕೋರ್ಟ್‌ನಲ್ಲಿ ಅಕ್ರಮ-ಸಕ್ರಮ ಪ್ರಕರಣ ವಿಚಾರಣೆಯಲ್ಲಿದೆ. ಸರ್ಕಾರ ಯಾವುದೇ ಸೂಚನೆ ನೀಡದೆ ಶುಲ್ಕ ವಸೂಲಿ ಮಾಡಲು ಸಾಧ್ಯವಿಲ್ಲ. ಆದರೆ ಏಕನಿವೇಶನಗಳಲ್ಲಿ ಶುಲ್ಕ ವಿಧಿಸಲು ಕಾನೂನು ಅಡಚಣೆಯಿಲ್ಲ ಎಂದರು. ಮೇಯರ್ ಕಟ್ಟೆ ಸತ್ಯನಾರಾಯಣ, 30-40 ಹಾಗೂ 40-60 ಅಳತೆಯ ನಿವೇಶನಗಳಿಗೆ ಶುಲ್ಕ ವಿಧಿಸಲು ಕಾನೂನು ತೊಡಕು ಉಂಟಾಗುತ್ತದೆ. ಸರ್ಕಾರದ ಬಳಿ ನಿಯೋಗ ಕೊಂಡೊಯ್ದು ಶುಲ್ಕ ವಿಧಿಸಲು ಚರ್ಚಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

4 ತಿಂಗಳಾಯಿತು: ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಅಶ್ವತ್ಥನಾರಾಯಣಗೌಡ, ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಳ್ಳಲು 4 ತಿಂಗಳ ಹಿಂದೆ ಪಾಲಿಕೆ ಸಭೆಯಲ್ಲಿ ನಿರ್ಣಯವಾಗಿತ್ತು. ಆದರೆ ಅಧಿಕಾರಿಗಳು ಪಾಲಿಕೆಗೆ ಆದಾಯ ಬರುವ ಮೂಲಗಳಲ್ಲಿ ಕೈ ಅಡ್ಡವಿಡುತ್ತಿದ್ದಾರೆ. ಶುಲ್ಕ ವಸೂಲಿ ಮಾಡಲು ಸಾಧ್ಯವಾಗದ ಅಧಿಕಾರಿಗಳು ಪಾಲಿಕೆಗೆ ಅವಶ್ಯವಿಲ್ಲ. ಜನರು ಕೂಡಾ ಶುಲ್ಕ ನೀಡಲು ಯಾವಾಗ ಆದೇಶ ಹೊರಡುತ್ತದೆ ಎಂದು ಕಾಯುತ್ತಿದ್ದಾರೆ. ಮುಖ್ಯಮಂತ್ರಿಗಳು ಬಿಬಿಎಂಪಿಗೆ 4,000 ಕೋಟಿ ಸಂಗ್ರಹಿಸಲು ಸಾಧ್ಯ ಎಂದು ಇತ್ತೀಚೆಗೆ ಹೇಳಿದ್ದಾರೆ. ಆದರೆ ಅಧಿಕಾರಿಗಳು ವಸೂಲಿ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿಯ ಎನ್.ನಾಗರಾಜು, ಯಾವುದೇ ತೆರಿಗೆ ಸಂಗ್ರಹಿಸಲು ಪ್ರತಿ ವಲಯಗಳಲ್ಲಿ ವಾರಕ್ಕೊಮ್ಮೆ ತೆರಿಗೆ ಮೇಳ ನಡೆಸಬೇಕು. ತೆರಿಗೆ ಕಟ್ಟಿಸಿಕೊಳ್ಳಲು ಅಧಿಕಾರಿಗಳಿಗೆ ಕಾಲಮಿತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಬೆಂಬಲಿಸಿದ ಮಾಜಿ ಮೇಯರ್ ವೆಂಕಟೇಶಮೂರ್ತಿ, ಎಸ್.ಕೆ.ನಟರಾಜ್ ಹಾಗೂ ಕಾಂಗ್ರೆಸ್‌ನ ನಾಗರಾಜ್, ಅಧಿಕಾರಿಗಳಿಗೆ ಇಚ್ಛಾಶಕ್ತಿಯಿಲ್ಲ. ಕಟ್ಟಡ ನಿರ್ಮಿಸಿದವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಕೊಂಡವರಿಗೆ ತೊಂದರೆಯಾಗುತ್ತದೆ ಎಂದು ದೂರಿದರು. ಮಧ್ಯಾಹ್ನದ ನಂತರ ವಿಷಯ ಮತ್ತೆ ಚರ್ಚೆಗೆ ಬಂದಾಗ ಮಾತನಾಡಿದ ಬಿಜೆಪಿಯ ಪದ್ಮನಾಭರೆಡ್ಡಿ, ಅಧಿಕಾರಿಗಳು 5,000 ಎಕರೆಯ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ನಿವೇಶನದಲ್ಲಿ ಕಟ್ಟಡ ನಿರ್ಮಿಸಿದ ನಂತರ ಅಭಿವೃದ್ಧಿ ಶುಲ್ಕವನ್ನು ಮಧ್ಯಮವರ್ಗ ಹಾಗೂ ಬಡವರು ಪಾವತಿಸಬೇಕಾಗುತ್ತದೆ.

ಸಭಾಂಗಣಕ್ಕೆ ಕಟ್ಟೆ ಸತ್ಯ ಹೆಸರು ಪ್ರತಿಪಕ್ಷಗಳ ಆಕ್ಷೇಪ

ನೌಕರರ ಸಭಾಂಗಣಕ್ಕೆ ‘ಕಟ್ಟೆ ಸತ್ಯ’ ಹೆಸರು ನೀಡಿರುವ ವಿಚಾರವನ್ನು ಮೇಯರ್ ಗಮನಕ್ಕೆ ತಾರದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಸಭೆ ಆರಂಭವಾದ ಸ್ವಲ್ಪ ಹೊತ್ತಿನ ಬಳಿಕ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಮಂಜುನಾಥ ರೆಡ್ಡಿ, ಮೇಯರ್‌ಗೆ ತಿಳಿಸದೆ ಸಭಾಂಗಣಕ್ಕೆ ಹೆಸರಿಟ್ಟಿದ್ದು ತಪ್ಪು. ಬಿಬಿಎಂಪಿ ಹಣದಿಂದ ನಿರ್ಮಿಸಿದ ಸಭಾಂಗಣಕ್ಕೆ ಮೇಯರ್ ಹೆಸರು ಏಕೆ ಬೇಕು, ಇದರಿಂದಾಗಿ ಬೆಂಗಳೂರಿನ ಜನರಿಗೆ ಅವಮಾನವಾಗಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಸಭೆ 10 ನಿಮಿಷ ಮುಂದೂಡಲಾಯಿತು.