DENOTIFICATION OF ARKAVATHY LAYOUT LANDS – ILLEGAL – OPPOSITION DEMANDS CBI ENQUIRY

FRAUDULENT DENOTIFICATION OF LANDS ACQUIRED FOR ARKAVATHY LAYOUT HAS COME TO THE DISCUSSION IN THE LEGISLATIVE ASSEMBLY TODAY AND THE OPPOSITION DEMANDED A CBI ENQUIRY. 

A NEWS REPORT

 

ಅಕ್ರಮ ಡಿನೋಟಿಫಿಕೇಶನ್ ಭೂತ ಸದನದಲ್ಲಿ ಮತ್ತೆ ಸದ್ದು ಮಾಡಿದ್ದು, ಅರ್ಕಾವತಿ ಬಡಾವಣೆಯ 541 ಎಕರೆ ಡಿನೋಟಿಫಿಕೇಶನ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಪಟ್ಟು ಹಿಡಿದಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್‌ಗೆ ಫಂಡ್ ನೀಡಲು ಸಿದ್ದರಾಮಯ್ಯ ಈ ಅಕ್ರಮ ಎಸಗಿದ್ದು, ಸಿಬಿಐ ತನಿಖೆ ನಡೆಸುವಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ಸದಸ್ಯರು ಆಗ್ರಹಿಸಿದರು.

ಆದರೆ ಇದು ಶೆಟ್ಟರ್ ಕಾಲದಲ್ಲೇ ಆದ ಶಿಫಾರಸು. ವಿಧಾನಸಭೆ ಚುನಾವಣೆಗೆ ಹಣ ಹೊಂದಿಸುವುದಕ್ಕಾಗಿ ಶೆಟ್ಟರ್ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿ ಆರೋಪ ಮಾಡಿದರು. ಹೀಗಾಗಿ ಆಡಳಿತ-ಪ್ರತಿಪಕ್ಷ ಸದಸ್ಯರು ಗದ್ದಲ ಸೃಷ್ಟಿಸಿದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಕಲಾಪವನ್ನು ಶನಿವಾರಕ್ಕೆ ಮುಂದೂಡಿದ್ದಾರೆ.

ಆಗಿದ್ದೇನು? ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ 20-6-2014ರಂದು ನ್ಯಾಯಾಲಯಕ್ಕೆ ರಾಜ್ಯಪತ್ರ ಸಲ್ಲಿಸಿ ಅರ್ಕಾವತಿ ಬಡಾವಣೆಯ 541 ಎಕರೆಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಜಗದೀಶ್ ಶೆಟ್ಟರ್ ನಿಲುವಳಿ ಸೂಚನೆ ಮಂಡಿಸಿದ್ದರು. ಆದರೆ ನಿಯಮ 69ರ ಅನ್ವಯ ಚರ್ಚೆಗೆ ಸ್ಪೀಕರ್ ಅನುಮತಿ ನೀಡಿದ್ದರು. ಶೆಟ್ಟರ್ ಪ್ರಸ್ತಾಪಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ಸಿಎಂ 2003ರಿಂದ ಇಲ್ಲಿಯವರೆಗೆ ನಡೆದ ಅರ್ಕಾವತಿ ಡಿನೋಟಿಫಿಕೇಶನ್‌ನ ಸಂಪೂರ್ಣ ವಿವರ ನೀಡಿದರು.

‘ನಾನು ಅಧಿಕಾರಕ್ಕೆ ಬಂದ ನಂತರ ಒಂದು ಗುಂಟೆ ಜಾಗವನ್ನೂ ಡಿನೋಟಿಫೈ ಮಾಡಿಲ್ಲ. ಮಾಡುವುದೂ ಇಲ್ಲ.’ ಎಂದು ಮಾತಿಗಾರಂಭಿಸಿದ ಸಿಎಂ, ‘ಶೆಟ್ಟರ್ ಕಾಲದಲ್ಲಿ ಭೂಸ್ವಾಧೀನ ಅಧಿಕಾರಿಗಳ ವರದಿ ಆಧರಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ ಕೋರ್ಟ್ ಆದೇಶದ ಪ್ರಕಾರ ರಾಜ್ಯಪತ್ರ ಹೊರಡಿಸಿ ಅರ್ಕಾವತಿ ಬಡಾವಣೆಗೆ ಮರು ಯೋಜನೆ ಸಲ್ಲಿಸಿದ್ದೇವೆ. ಇದರಿಂದ 1766 ಎಕರೆ ಜಾಗದಲ್ಲಿ 11 ಸಾವಿರ ಜನರಿಗೆ ನಿವೇಶನ ಒದಗಿಸಲು ಸಾಧ್ಯ. ನಾವು ಮಾಡಿದ ರಿ ಮಾಡಿಫಿಕೇಶನ್‌ನಲ್ಲಿ ಅಕ್ರಮ ಆಗಿಲ್ಲ. ಕೋರ್ಟ್ ರೂಪಿಸಿದ 6 ಮಾರ್ಗಸೂಚಿಗೆ ವಿರುದ್ಧ ಡಿನೋಟಿಫಿಕೇಶನ್ ನಡೆದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ತಮ್ಮ ಉತ್ತರದ ಸಂದರ್ಭದಲ್ಲಿ 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಆದ ನಂತರ 3839 ಎಕರೆ ಪೈಕಿ ಬಿಡಿಎ ಮತ್ತು ಅಂದಿನ ಸರ್ಕಾರ 1089.12 ಎಕರೆ ಡಿನೋಟಿಫೈ ಮಾಡಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ 80. 8 ಎಕರೆ ಡಿನೋಟಿಫೈ ಮಾಡಲಾಗಿತ್ತು. 2006ರಲ್ಲಿ 140 ಎಕರೆ ಡಿನೋಟಿಫಿಕೇಶನ್ ಆಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಡಿಎ ಹಾಗೂ ಸಕ್ಷಮ ಪ್ರಾಧಿಕಾರಗಳ ಶಿಫಾರಸು ಇಲ್ಲದೇ 198.20 ಎಕರೆ ಡಿನೋಟಿಫಿಕೇಶನ್ ಆಗಿತ್ತು ಎಂದರು. 

ಯಡಿಯೂರಪ್ಪ ಕಾಲದಲ್ಲಿ ಆದ ಡಿನೋಟಿಫಿಕೇಶನ್ ಪ್ರಕರಣವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿದ ಅವರು ಇದಕ್ಕೆ ನೀವೇ ಹೊಣೆ ಎಂದು ಬಿಜೆಪಿಯವರನ್ನು ಛೇಡಿಸಿದರು. 

ಶೆಟ್ಟರ್ ಕೋಪ: ಇದು ಶೆಟ್ಟರ್ ಕೋಪಕ್ಕೆ ಕಾರಣವಾಯ್ತು. ‘ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಸ್ತಾಪ ಬಂದಿದ್ದು ನಿಜ. ಆದರೆ ಕಾನೂನು ಬಾಹಿರವಾಗಿದೆ ಎಂದು ನಾನು ಮಾಡಿರಲಿಲ್ಲ. ಇವರು ಮುಖ್ಯಮಂತ್ರಿಯಾದ ನಂತರ ನ್ಯಾಯಾಲಯ ಆದೇಶದ ನೆಪ ಮಾಡಿಕೊಂಡು ಡಿನೋಟಿಫಿಕೇಶನ್‌ನ್ನು ರಿ ಮಾಡಿಫಿಕೇಶನ್ ಹೆಸರಿನಲ್ಲಿ ನಡೆಸಿದ್ದಾರೆ’ ಎಂದು ಆರೋಪಿಸಿದರು. ಇದಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ್‌ಕುಮಾರ್, ಕೆ.ಜಿ.ಬೋಪಯ್ಯ, ಡಾ.ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್ ಧ್ವನಿಗೂಡಿಸಿದರು. ‘ಸಿಎಂ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಫಂಡ್‌ಗೆ ಈ ಅಕ್ರಮ ಎಸಗಿದ್ದಾರೆ. ಹಗರಣ ಬಯಲಾಗಲು ಸಿಬಿಐ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಸ್ಪೀಕರ್ ಮುಂದಿನ ಆವರಣದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟಿಸಿದರು.

ಅಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ನೇರ ಹೊಣೆ. ಡಿನೋಟಿಫಿಕೇಶನ್‌ಗೆ ‘ರಿ ಡು’ ಹಾಗೂ ರಿ ಮಾಡಿಫಿಕೇಶನ್ ಹೆಸರು ನೀಡಿದ್ದಾರೆ.  ಸಿಬಿಐ ತನಿಖೆಯಿಂದ ಸತ್ಯ ಬಹಿರಂಗವಾಗಲೆ. ನನ್ನ ಅವಧಿಯಲ್ಲೇ ಪ್ರಸ್ತಾಪ ಬಂದಿತ್ತು. ಆದರೆ, ಅಕ್ರಮ ಸಾಧ್ಯತೆಯಿಂದ ಅನುಮತಿಸಿರಲಿಲ್ಲ.

– ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ

ಸಿಬಿಐಯನ್ನು ಭೂತ ಎಂದು ಕರೆಯುತ್ತಿದ್ದ ಶೆಟ್ಟರ್‌ಗೆ ಈಗ ಆ ಸಂಸ್ಥೆಯ ಮೇಲೆ ಪ್ರೀತಿ ಬಂದಿದೆ. ಇದು ಅವರ ಕಾಲದ್ದೇ ಅಕ್ರಮ. ನಾನು ಒಂದಿಂಚು ಭೂಮಿಯನ್ನೂ ಡಿನೋಟಿಫೈ ಮಾಡಿಲ್ಲ. ಸುಪ್ರೀಂ ಮಾರ್ಗಸೂಚಿ ಪ್ರಕಾರವೇ ರಿ-ಡು ನಡೆದಿದೆ.

ARKAVATHY LAYOUT ILLEGAL DENOTIFICATION
ARKAVATHY LAYOUT ILLEGAL DENOTIFICATION