PRAJAVANI – A LEADING KANNADA DAILY – ON AKRAMA – SAKRAMA

http://www.prajavani.net/article/%E0%B2%85%E0%B2%95%E0%B3%8D%E0%B2%B0%E0%B2%AE-%E0%B2%B8%E0%B2%95%E0%B3%8D%E0%B2%B0%E0%B2%AE-%E0%B2%95%E0%B2%A0%E0%B2%BF%E0%B2%A3

ಬೆಂಗಳೂರು: ನಗರ ಪ್ರದೇಶಗಳಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮ­ಗೊಳಿಸುವ ಯೋಜನೆಯ ನಿಯಮಾವಳಿ­ಗಳನ್ನು  ಸರ್ಕಾರ ಮತ್ತಷ್ಟು ಕಠಿಣಗೊ­ಳಿಸಿದೆ.

ಅಕ್ರಮ–ಸಕ್ರಮ ಯೋಜನೆ ಅಡಿ ಶೇಕಡ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಕ್ಷೆ ಉಲ್ಲಂಘಿಸಿರುವ ಕಟ್ಟಡಗಳನ್ನು ಸಕ್ರಮ­ಗೊಳಿಸಲು ಈಗಾಗಲೇ  ರೂಪಿ­ಸಿದ್ದ ನಿಯಮಾವಳಿಗಳಿಗೆ ಕೆಲವು ಮಾರ್ಪಾಡು­ಗಳನ್ನು ಮಾಡಲಾಗಿದೆ.

ನಗರಾಭಿವೃದ್ಧಿ ಇಲಾಖೆ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಆ ಪ್ರಕಾರ ಸಕ್ರಮಕ್ಕೆ ಪರಿ­ಗಣಿಸುವ ಲೆಕ್ಕಾಚಾರದಲ್ಲಿ ಕೆಲ ಮಾನದಂಡಗಳನ್ನು ಬದಲಾಯಿಸ­ಲಾಗಿದೆ.

ಕಟ್ಟಡದ ನಾಲ್ಕು ಬದಿಗಳಲ್ಲಿ ಆಗಿ­ರುವ ಉಲ್ಲಂಘನೆ­ಗಳನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡಿ ಸಕ್ರಮ ಯೋಜನೆ ವ್ಯಾಪ್ತಿಗೆ ತರಲು ನಿರ್ಧರಿಸ­ಲಾಗಿದೆ.
ಯಾವುದೇ ಒಂದು ಬದಿಯಲ್ಲಿ ಶೇಕಡ 50ಕ್ಕೂ ಹೆಚ್ಚು ನಕ್ಷೆ ಉಲ್ಲಂಘನೆಯಾಗಿದ್ದರೆ ಆ ಕಟ್ಟಡವನ್ನು ಸಕ್ರಮಕ್ಕೆ ಪರಿಗಣಿಸುವುದಿಲ್ಲ.  ಹೀಗಾಗಿ ಬಿಬಿಎಂಪಿ ಸೇರಿದಂತೆ ಹಲವು ನಗರಗಳಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮದ ವ್ಯಾಪ್ತಿಗೆ ತರಲು ಅಸಾಧ್ಯವಾಗಲಿದೆ.  ಈ ಮೊದಲು, ಕಟ್ಟಡದ ಒಟ್ಟಾರೆ ಪ್ರದೇಶ ಉಲ್ಲಂಘನೆ ಆಗಿರುವುದನ್ನು ಪರಿ­ಗಣಿಸಿ ಲೆಕ್ಕಾಚಾರ ಮಾಡಲು ಉದ್ದೇಶಿಸಲಾಗಿತ್ತು.

ಈ ಯೋಜನೆ ಅಡಿಯಲ್ಲಿ ವಸತಿ ಕಟ್ಟಡಗಳಿಗೆ ಶೇಕಡ 50ರಷ್ಟು ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇಕಡ 25ರಷ್ಟು ಉಲ್ಲಂಘನೆಯಾಗಿರುವುದನ್ನು ಪರಿಗಣಿಸಲು ನಿರ್ಧರಿಸಲಾಗಿದೆ. ಆದರೆ, ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶೇಕಡ 25ರಷ್ಟು ಉಲ್ಲಂಘನೆಯಾಗಿದ್ದರೆ ಪ್ರತಿ ಚದರ ಮೀಟರ್‌ಗೆ ಮಾರುಕಟ್ಟೆ ಮೌಲ್ಯದ ಶೇಕಡ 6ರಷ್ಟು ಹಾಗೂ ಶೇಕಡ 25ರಿಂದ 50ರಷ್ಟು ಉಲ್ಲಂಘನೆ­ಯಾಗಿದ್ದರೆ ಪ್ರತಿ ಚದರ ಮೀಟರ್‌ಗೆ ಮಾರುಕಟ್ಟೆ ಮೌಲ್ಯದ ಶೇಕಡ 8ರಷ್ಟು ಶುಲ್ಕ ವಿಧಿಸಲಾಗುವುದು.

ಒಂದು ನಗರ ಸ್ಥಳೀಯ ಸಂಸ್ಥೆಯಿಂದ ಇನ್ನೊಂದು ಸ್ಥಳೀಯ ಸಂಸ್ಥೆಗೆ ಈ ನಿಯಮಾವಳಿಗಳು ಬದಲಾಗ­ಲಿವೆ. ರಸ್ತೆ ಅಗಲ, ವಲಯ, ಅಂತಸ್ತು ವಿಸ್ತೀರ್ಣ ಅನುಪಾತ (ಎಫ್‌­ಎ­ಆರ್‌) ಮುಂತಾ­ದವು­ಗಳನ್ನು ಸಕ್ರಮಗೊಳಿಸುವ ಸಂದರ್ಭ­­ದಲ್ಲಿ ಪರಿಗಣಿಸಲು ಉದ್ದೇಶಿ­ಸಲಾಗಿದೆ.

ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯ ನಿವೇಶನ, ಉದ್ಯಾನ ಮತ್ತು ಬಯಲು­ಪ್ರದೇಶ ಕಲ್ಪಿಸದವರಿಗೂ ಶುಲ್ಕವನ್ನು ಕಡಿಮೆ ಮಾಡಲಾಗಿದೆ.  60 ಚದರ ಮೀಟರ್‌ ನಿವೇಶನಕ್ಕೆ ಮಾರುಕಟ್ಟೆ ಮೌಲ್ಯದ ಶೇಕಡ 3ರಷ್ಟು, 60ರಿಂದ 120 ಚದರ ಮೀಟರ್‌ ನಿವೇಶನಕ್ಕೆ ಮಾರುಕಟ್ಟೆ ಮೌಲ್ಯದ ಶೇಕಡ 5ರಷ್ಟು ಮತ್ತು 120 ಚದರ ಮೀಟರ್‌ ನಿವೇಶನಕ್ಕೆ ಮಾರು­ಕಟ್ಟೆ ಮೌಲ್ಯದ ಶೇಕಡ 15ರಷ್ಟು ಶುಲ್ಕವನ್ನು ಪಡೆಯಲು ನಿರ್ಧರಿಸಲಾಗಿದೆ.

ಈ ಮೊದಲು ಎಲ್ಲ ನಿವೇಶನಗಳಿಗೆ ಶೇಕಡ 15ರಷ್ಟು ಶುಲ್ಕ ಪಡೆಯಲು ಉದ್ದೇಶಿಸಲಾಗಿತ್ತು.  ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಇದು ಹೊರೆಯಾಗಲಿದೆ ಎನ್ನುವು­ದನ್ನು ಗಮನಿಸಿ ಶುಲ್ಕ ಕಡಿಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯನ್ನು ಅನುಷ್ಠಾನ­ಗೊಳಿಸಲು ಸರ್ಕಾರ ಈಗ ಹೈಕೋರ್ಟ್‌ ಅನುಮತಿಗೆ ಕಾಯುತ್ತಿದೆ.