ಟಿಜಿಎಸ್ ವಂಚನೆ ಬೃಹತ್ ಪ್ರತಿಭಟನೆ

ಬೆಂಗಳೂರು, ಫೆ.೬: ಟಿಜಿಎಸ್ ಸಂಸ್ಥೆಯವರು ಫ್ಲ್ಯಾಟ್ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿಂದು ನೂರಾರು ಸಂತ್ರಸ್ತರು ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಟಿಜಿಎಸ್ ಕನ್‌ಸ್ಟ್ರಕ್ಷನ್, ಡ್ರೆಮ್ಜ್ ಜಿಕೆ ಮತ್ತು ಗೃಹ ಕಲ್ಯಾಣ್ ಕಂಪನಿಗಳು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದೆ. ಬಡ ಮತ್ತು ಮಧ್ಯಮ ವರ್ಗದವರು ಸ್ವಂತ ಸೂರು ಹೊಂದುವ ಉದ್ದೇಶದಿಂದ ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಈ ಕಂಪನಿಗಳಿಗೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮನೆಗಾಗಿ ಕಾಯುತ್ತಿದ್ದೇವೆ. ಆದರೆ ಇದುವರೆಗೆ ಮನೆಯನ್ನೂ ನೀಡದೆ, ಹಣವನ್ನೂ ವಾಪಾಸ್ ಮಾಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಂಸ್ಥೆಯ ಮೋಸವನ್ನು ಅರಿತು ಕೆಲವರು ತಮ್ಮ ಬುಕ್ಕಿಂಗ್ ರದ್ದುಪಡಿಸಿದ್ದಾರೆ. ಅಂತಹವರಿಗೆ ಪೋಸ್ಟ್‌ಪೇಯ್ಡ್ ಚೆಕ್‌ಗಳನ್ನು ಕಂಪನಿ ನೀಡಿತ್ತು. ಆದರೆ ಇದೀಗ ಈ ಚೆಕ್‌ಗಳು ಕೂಡ ಬೌನ್ಸ್ ಆಗಿದೆ. ಟಿಜಿಎಸ್ ಕಚೇರಿ ಮುಚ್ಚಿದ್ದು, ಏನು ಮಾಡಬೇಕೆಂದು ತಿಕ್ಕುತೋಚದಾಗಿದೆ ಎಂದು ಪ್ರತಿಭಟನಕಾರರು ಅಸಹಾಯಕತೆ ವ್ಯಕ್ತಪಡಿಸಿದರು.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆದರೆ ಪೊಲೀಸರು ಕೂಡ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನಮಗೆ ನ್ಯಾಯದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.