ಹೆಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಅರಳೂರು ಕೆರೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಪೂರ್ವಕ ಬಿಲ್ಡರ್ಸ್ ನಿರ್ಮಾಣ ಮಾಡಿರುವ ಕಟ್ಟಡವನ್ನು ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿಯವರು ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಬೊಮ್ಮನಹಳ್ಳಿ ವಲಯದ ಸರ್ಜಾಪುರ ಹೋಬಳಿಯ ಕೂಡ್ಲು ಗ್ರಾಮದ ಬಳಿ ಅರಳೂರು ಕೆರೆ ಸಮೀಪದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗುತ್ತಿದ್ದ ಅಪಾರ್ಟ್‍ಮೆಂಟ್ ಕಟ್ಟಡ ಕಾಮಗಾರಿಯನ್ನು ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕಾಂಪೌಂಡನ್ನು ತೆರವುಗೊಳಿಸಿದ್ದಾರೆ.

ರಾಜಕಾಲುವೆಯ ಪಥವನ್ನೇ ಬದಲಾಯಿಸಿ ಪೂರ್ವಾಂಕರ ಸಂಸ್ಥೆಯು ಸ್ಕೈಬ್ಲೂ ಅಪಾರ್ಟ್‍ಮೆಂಟ್‍ನ್ನು ನಿರ್ಮಿಸುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಅವರು, ಕಾಮಗಾರಿಯನ್ನು ನಿಲ್ಲಿಸುವಂತೆ ಆದೇಶಿಸಿದರು.

ಕಟ್ಟಡ ಕಾರ್ಮಿಕರನ್ನು ಸ್ಥಳದಿಂದ ಹೊರಕ್ಕೆ ಕಳುಹಿಸಿ ಕಟ್ಟಡ ಮಾಲೀಕರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೂಡ್ಲು ಗ್ರಾಮದ ವೆಂಕಟಸ್ವಾಮಿ ರೆಡ್ಡಿ ಅವರಿಗೆ ಸೇರಿದೆ ಎನ್ನಲಾದ ಸರ್ವೆ ನಂ. 100/3 ಜಮೀನಿನ ಪ್ರವೇಶವನ್ನು ಪೂರ್ವಾಂಕರ ಮಾಲೀಕರು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ವೆಂಕಟಸ್ವಾಮಿರೆಡ್ಡಿ ಬಿಬಿಎಂಪಿಗೆ ಈ ಹಿಂದೆಯೇ ದೂರು ನೀಡಿದರು.

ವಾಸ್ತವವಾಗಿ ಈ ಪ್ರದೇಶವು ರಾಜಕಾಲುವೆಯನ್ನು ಒಳಗೊಂಡಿದ್ದರೂ ಅಧಿಕಾರಿಗಳು ರಾಜಕಾಲುವೆ ತೆರವುಗೊಳಿಸಲು ಯಾವುದೇ ಕ್ರಮವನ್ನು ಕೈಗೊಲ್ಲದೆ ಇರುವುದು ಮೇಯರ್ ರವರನ್ನು ಸಿಟ್ಟಿಗೆಬ್ಬಿಸಿತು. ಆದರೆ, ಸ್ಥಳದಲ್ಲಿ ಯಾವುದೇ ಅಧಿಕಾರಿಗಳು ಇಲ್ಲದಿರುವುದು ಮೇಯರ್ ಅವರು ಮತ್ತಷ್ಟು ಸಿಟ್ಟಿಗೆದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೇಯರ್ ಆದ ನಾನೇ ಇಲ್ಲಿಗೆ ಬಂದಿದ್ದೇನೆ, ಅಧಿಕಾರಿಗಳು ಬರಲು ದಾಡಿ ಏನು ಇದನ್ನೆಲ್ಲಾ ನೋಡಿದರೆ ಪೂರ್ವಾಂಕರ ಸಂಸ್ಥೆಯೊಡನೆ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಕಿಡಿಕಾರಿದರು.

ಪೂರ್ವಾಂಕರ ಸಂಸ್ಥೆಯವರು 33 ಅಡಿ ರಾಜಕಾಲುವೆ ಪೈಕಿ 15 ಅಡಿಗಳಷ್ಟು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ, ರಸ್ತೆ ನಿರ್ಮಾಣಕ್ಕಾಗಿ ರಾಜಕಾಲುವೆಯ ಪಥವನ್ನೇ ಬದಲಿಸಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿ ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಅಪಾರ್ಟ್ ಮೆಂಟ್ ಕಟ್ಟಡವನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ರವರಿಗೆ ಮೇಯರ್ ಅವರು ಆದೇಶಿಸಿದರು.