Site icon ECO PACK

A PRESS REPORT ON THE RECOVERY OF GOVERNMENT LANDS

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಗ್ರಾಮದ ಸರ್ವೆ ಸಂಖ್ಯೆ 122ರಲ್ಲಿರುವ 18 ಎಕರೆ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಲು ನಗರ ಜಿಲ್ಲಾಧಿಕಾರಿ ಅವರ ನ್ಯಾಯಾಲಯ ಆದೇಶಿಸಿದೆ.

ಸರ್ವೆ ಸಂಖ್ಯೆ 122/1ರಲ್ಲಿ 4 ಎಕರೆ, ಸರ್ವೆ ಸಂಖ್ಯೆ 122/12ರಲ್ಲಿ 4 ಎಕರೆ, 122/13ರಲ್ಲಿ 4 ಎಕರೆ, 122/14ರಲ್ಲಿ  5 ಎಕರೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿರುವುದನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದೆ.

‘ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪಕ್ಕದಲ್ಲಿರುವ ಈ ಜಾಗದಲ್ಲಿ ಪ್ರಭಾವಿ  ವ್ಯಕ್ತಿಗಳ ಶಿಕ್ಷಣ ಸಂಸ್ಥೆಗಳು ಹಾಗೂ ಬಹುಮಹಡಿ ಕಟ್ಟಡಗಳು ಇವೆ. ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್‌ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಕಟ್ಟಡಗಳು ಇಲ್ಲಿವೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಎಲ್ಲ ಆಸ್ತಿಗಳನ್ನು ಶನಿವಾರ ವಶಕ್ಕೆ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಮೈಸೂರು ರಸ್ತೆಯ ಪಕ್ಕದಲ್ಲೇ ಇರುವುದರಿಂದ ಇಲ್ಲಿ ಚದರ ಅಡಿ ಜಾಗಕ್ಕೆ ₹10 ಸಾವಿರ ಮೌಲ್ಯವಿದೆ. ವಶಪಡಿಸಿಕೊಳ್ಳಲಿರುವ ಈ ಜಾಗದ ಮೌಲ್ಯ ₹100 ಕೋಟಿ ಎಂದು ಅಂದಾಜಿಸಲಾಗಿದೆ.

ಕೆಂಗೇರಿಯಲ್ಲಿ 18 ಎಕರೆ, ಹೊಸಕೆರೆಹಳ್ಳಿ ಕೆರೆಯ ಬಳಿ 5 ಎಕರೆ, ಎಚ್ಎಸ್‌ಆರ್‌ ಬಡಾವಣೆಯ 5 ಎಕರೆ ಸೇರಿದಂತೆ ವಿವಿಧೆಡೆ 40 ಎಕರೆಯನ್ನು ವಶಕ್ಕೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

‘ಸುಮಾರು 50 ವರ್ಷಗಳ ಹಿಂದೆಯೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗವನ್ನು ಪರಭಾರೆ ಮಾಡಲಾಗಿತ್ತು. ಭೂಗಳ್ಳರು ನಕಲಿ ಪಹಣಿ, ಕ್ರಯಪತ್ರ (ಸೇಲ್‌ಡೀಡ್‌) ಸೃಷ್ಟಿಸಿ ಜಾಗ ಮಾರಾಟ ಮಾಡಿದ್ದರು.  ನಕಲಿ ದಾಖಲೆ ಪತ್ರಗಳ  ಆಧಾರದಲ್ಲೇ ಭೂಪರಿವರ್ತನೆಯೂ ಆಗಿತ್ತು. ಹಲವು ಮಂದಿಯ ಕೈಬದಲಾಗಿತ್ತು. ಕೆಲವು ವರ್ಷಗಳ ಹಿಂದೆ ಭೂಮಂಜೂರಾತಿ ಬಗ್ಗೆ  ಅನುಮಾನ ಮೂಡಿತ್ತು. ಈ ಬಗ್ಗೆ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಯಿತು. ಪ್ರತಿವಾದಿಗಳು  ಮೂಲ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾದರು.  1964ರ ಭೂ ಕಂದಾಯ ಕಾಯ್ದೆ ಕಲಂ 136 (3) (ಭೂಸ್ವಾಮಿತ್ವದ ನೈಜತೆ) ಅಡಿ ವಿಚಾರಣೆ ನಡೆಸಲಾಗಿದ್ದು, ಅದರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಈ ಪ್ರಕರಣದಲ್ಲಿ ಬಿ.ಸಿ. ತಿಮ್ಮರಾಯಪ್ಪ, ಜಿ.ವೆಂಕಟೇಶ್‌, ಗೌತಮ್‌ ಕೃಷ್ಣನ್‌ ಎಂಬವರು ಪ್ರತಿವಾದಿಗಳಾಗಿದ್ದರು. ‘18 ಎಕರೆಯಲ್ಲಿ 10ಕ್ಕೂ ಅಧಿಕ ಕಟ್ಟಡಗಳು ಇವೆ. ಭೂ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆ ಈ ಕಟ್ಟಡಗಳ ಮಾಲೀಕರು ಜಾಗ ಖರೀದಿ ಮಾಡಿದ್ದಾರೆ. ಸರ್ಕಾರಿ ಜಾಗವಾಗಿರುವ ಕಾರಣ ಅವರೆಲ್ಲರೂ ಬೆಲೆ ತೆರಬೇಕಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಇಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡುವ ಬದಲು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ತಿಳಿಸಿದರು.

ಏನಿದು ಪ್ರಕರಣ?: ಈ ಜಾಗದ ವಿವಾದ ದಶಕಗಳ ಹಿಂದೆಯೇ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿತ್ತು.  2009ರಲ್ಲಿ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಈ ಜಾಗ ತಮಗೆ ಸೇರಿದ್ದು ಎಂದು ಬಿ.ಸಿ. ಗುಳ್ಳಪ್ಪ, ಬಿ.ಸಿ. ತಿಮ್ಮರಾಯಪ್ಪ, ಬಿ.ಸಿ. ಗುಂಡಪ್ಪ, ಸುದರ್ಶನ್‌ ಜುನೇಜಾ, ಶಾರದಾದೇವಿ ಎಂಬವರು ವಾದಿಸಿದ್ದರು. ಈ ಬಗ್ಗೆ ಯಾವುದೇ ದಾಖಲೆಗಳು ಇಲ್ಲದಿರುವ ಕಾರಣ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ವಿಶೇಷ ಜಿಲ್ಲಾಧಿಕಾರಿ ಅವರು 2009ರ ಜುಲೈ 9ರಂದು ಆದೇಶಿಸಿದ್ದರು

ಇದನ್ನು ಪ್ರಶ್ನಿಸಿ ಬಿ.ಸಿ. ತಿಮ್ಮರಾಯಪ್ಪ, ಬಿ.ಸಿ. ಗುಂಡಪ್ಪ ಅವರ ಪುತ್ರ ಜಿ. ವೆಂಕಟೇಶಯ್ಯ ಹೈಕೋರ್ಟ್‌ ಮೊರೆ ಹೋಗಿದ್ದರು. ವಿಶೇಷ ಜಿಲ್ಲಾಧಿಕಾರಿ ಅವರ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್‌, ‘ಅರ್ಜಿದಾರರಿಗೆ ಮತ್ತೊಮ್ಮೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡುವ ಸಲುವಾಗಿ ಪ್ರಕರಣದ ಮರು ವಿಚಾರಣೆ ನಡೆಸಬೇಕು’ ಎಂದು  ನಿರ್ದೇಶನ ನೀಡಿತ್ತು.

2010ರಲ್ಲಿ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯ ಮತ್ತೊಮ್ಮೆ ಪ್ರಕರಣದ ವಿಚಾರಣೆ ಆರಂಭಿಸಿತ್ತು. ತಮ್ಮನ್ನು ಪ್ರತಿವಾದಿಗಳನ್ನಾಗಿ ಸೇರಿಸಿಕೊಳ್ಳಬೇಕು ಎಂದು ಆದರ್ಶ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೇಮರಾಜ ಜೈನ್‌, ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಫೈನಾನ್ಸಿಯಲ್‌ ಅನಾಲಿಸ್ಟ್ಸ್‌ ಆಫ್‌ ಇಂಡಿಯಾದ (ಐಸಿಎಫ್‌ಐ) ಪರವಾಗಿ ಅದರ ರಿಜಿಸ್ಟ್ರಾರ್‌ ಇ.ಎನ್‌.ಮೂರ್ತಿ ಅರ್ಜಿ ಸಲ್ಲಿಸಿದ್ದರು.

‘ಸರ್ವೆ ಸಂಖ್ಯೆ 122/12ರ ಜಾಗವನ್ನು ಸುದರ್ಶನ್‌ ಜುನೇಜಾ ಅವರು 1961ರಲ್ಲಿ ಖರೀದಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಆರ್‌ಟಿಸಿ ಸೇರಿದಂತೆ ಅಗತ್ಯ ದಾಖಲೆಗಳು ಇವೆ. ಬಳಿಕ ಅದಕ್ಕೆ ಸರ್ವೆ ಸಂಖ್ಯೆ 276 ಎಂದು ನೀಡಲಾಗಿತ್ತು. 1980ರಲ್ಲಿ ಜಾಗವನ್ನು ಕೈಗಾರಿಕಾ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲಾಗಿತ್ತು. 2003ರಲ್ಲಿ ಅವರು ಆದರ್ಶ ವಿದ್ಯಾ ಸಂಘದವರಿಗೆ ಮಾರಿದ್ದರು. ಈ ಜಾಗದಲ್ಲಿ ಸಂಘ ಹಲವಾರು ವಿದ್ಯಾಸಂಸ್ಥೆಗಳನ್ನು ಆರಂಭಿಸಿತ್ತು. ಸಂಘವು 2007ರಲ್ಲಿ ಜಾಗವನ್ನು  ಐಸಿಎಫ್‌ಐಗೆ ಮಾರಿತ್ತು. ಇಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ’ ಎಂದು ಇ.ಎನ್‌. ಮೂರ್ತಿ ವಾದಿಸಿದ್ದರು.

ಮತ್ತೊಬ್ಬ ಅರ್ಜಿದಾರರ ವಾದವೇನು?
‘ಸರ್ವೆ ಸಂಖ್ಯೆ 122ರ 5 ಎಕರೆ ಶಾರದಾದೇವಿ ಎಂಬವರಿಗೆ ಮಂಜೂರು ಮಾಡಲಾಗಿತ್ತು. ಈ ಸರ್ವೆ ಸಂಖ್ಯೆಯ ಬ್ಲಾಕ್‌ 13 ಹಾಗೂ 14ರ ಜಮೀನು ಮುನಿಯಪ್ಪ ಎಂಬವರಿಗೆ 1934ರಲ್ಲಿ ಮಂಜೂರಾಗಿತ್ತು. 1934ರ ನವೆಂಬರ್‌ನಲ್ಲಿ ಸಾಗುವಳಿ ಚೀಟಿ ಕೊಡಲಾಗಿತ್ತು. ಮುನಿಯಪ್ಪ ಅವರು 1948ರಲ್ಲಿ ಸುನಂದಮ್ಮ ಎಂಬವರಿಗೆ ಜಾಗ ಮಾರಾಟ ಮಾಡಿದ್ದರು. ಸುನಂದಮ್ಮ ಅವರು 1962ರಲ್ಲಿ ಶಾರದಾ ದೇವಿ ಎಂಬವರಿಗೆ ಪರಭಾರೆ ಮಾಡಿದ್ದರು. ಅದನ್ನು 1985ರಲ್ಲಿ ನಾನು ಖರೀದಿಸಿದ್ದೆ’ ಎಂದು ಗೌತಮ್‌ ಕೃಷ್ಣನ್‌ ವಾದ ಮಂಡಿಸಿದ್ದರು.

‘ಇದು ಸ್ವಾತಂತ್ರ್ಯಪೂರ್ವದಲ್ಲಿ ಮಂಜೂರಾದ ಜಾಗ. 1964ರ ಭೂ ಕಂದಾಯ ಕಾಯ್ದೆಯ ಕಲಂ 136 (3)ರ  ಪ್ರಕಾರ ವಿಚಾರಣೆ ನಡೆಸುವಂತಿಲ್ಲ ಎಂದೂ ವಾದಿಸಿದ್ದರು. ಇದು ಅಧಿಕಾರ ದುರುಪಯೋಗದ ಪ್ರಕರಣ ಎಂದೂ ದೂರಿದ್ದರು.

‘50 ವರ್ಷಗಳಲ್ಲಿ ಈ ಜಾಗ ಹಲವಾರು ವ್ಯಕ್ತಿಗಳ ಕೈ ಬದಲಾಗಿದೆ. ಈ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕೈಬರಹದ ಪಹಣಿ ಮಾತ್ರ ಇದೆ. ಬರಹಗಳು ಹಳಗನ್ನಡದಲ್ಲಿದ್ದು, ಸ್ಪಷ್ಟವಾಗಿಲ್ಲ. ಸರ್ಕಾರಿ ಜಮೀನು ಮಂಜೂರಾದ ಕುರಿತು ಪ್ರತಿವಾದಿಗಳಲ್ಲಿ ಯಾವುದೇ ನಿರ್ದಿಷ್ಟ ದಾಖಲೆಗಳು ಇಲ್ಲ’ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ 2011ರಲ್ಲಿ ವರದಿ ನೀಡಿದ್ದರು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾಧಿಕಾರಿ ವಿ.ಶಂಕರ್‌ ಆದೇಶ ಹೊರಡಿಸಿದ್ದಾರೆ.

Exit mobile version